ಪದ್ಮಣಪಂಡಿತ
1627. ಜೈನಕವಿ. ಹಯಸಾರಸಮುಚ್ಚಯವನ್ನು ಬರೆದಿದ್ದಾನೆ. ತಂದೆ ಕನಕಪುರದ ದೇವರಸ. ತಾಯಿ ಗುಮ್ಮಾಂಬೆ. ಹಯಶಾಸ್ತ್ರವನ್ನು ಕುರಿತ ಈ ಗ್ರಂಥದಲ್ಲಿ ಕುದುರೆಗಳ ಆಕೃತಿ, ಲಿಂಗ, ರೋಗ ಮತ್ತು ರೋಗ ನಿವಾರಣಾ ಕ್ರಮಗಳು ವಿವರವಾಗಿ ನಿರೂಪಿತವಾಗಿವೆ. ಕರ್ನಾಟಕ ಭಾಷೆಯಲ್ಲಿ ಕಂದ, ವೃತ್ತ, ವಚನಗಳಲ್ಲಿ ಸುಲಲಿತ ಪದಗಳಿಂದ ಈ ಕೃತಿಯನ್ನು ರಚಿಸಿರುವುದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಇದರಲ್ಲಿ ಒಟ್ಟು 20 ಅಧ್ಯಾಯಗಳು 8,000 ಗ್ರಂಥ ಸಂಖ್ಯೆಯೂ ಇವೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥಭಂಢಾರದಲ್ಲಿರುವ ಹಸ್ತಪ್ರತಿಯೊಂದರಲ್ಲಿ 170ನೆಯ ಗರಿಯ ವರೆಗೆ ಹಯಶಾಸ್ತ್ರವೂ ಮುಂದಿನ 46 ಗರಿಗಳಲ್ಲಿ ಜೋತಿಷ್ಯ, ಮಂತ್ರ, ವೈದ್ಯ ವಿಷಯಗಳೂ ಸಂಕಲನಗೊಂಡಿರುವುದರಿಂದ ಕವಿ, ಹಯಶಾಸ್ತ್ರವೊಂದರಲ್ಲಲ್ಲದೆ, ಜೋತಿಷ್ಯ ಮುಂತಾದ ಇತರ ವಿಷಯಗಳನ್ನೂ ಬಲ್ಲವನಾಗಿದ್ದನೆಂದೂ ತಿಳಿದುಬರುತ್ತದೆ. ಗ್ರಂಥದ ಅಧ್ಯಾಯಾಂತ ಗದ್ಯದಿಂದ ಅದು ಮೈಸೂರು ದೊರೆಯಾದ ಚಾಮರಾಜನ (1617-1637) ಆಜ್ಞಾನುಸಾರವಾಗಿ ಹುಟ್ಟಿದಂತೆಯೂ ಆ ಕಾರಣದಿಂದ ಈ ಗ್ರಂಥಕ್ಕೆ ಚಾಮರಾಜೀಯ ಎಂಬ ಹೆಸರು ಬಂದಂತೆಯೂ ತಿಳಿದುಬರುತ್ತದೆ. ಕವಿ ತನ್ನನ್ನು ಅಮಲ ಗುಣನಿಧಿ, ಆಯುರ್ವೇದ ಬುಧ, ಅಮಲಜಿನಪಾದಾರ್ಚಾಸಕ್ತ ಎಂದು ಹೊಗಳಿಕೊಂಡಿದ್ದಾನೆ.			(ಎಸ್.ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ